ಕಿಚ್‍ನರ್, ಹೋರೇಷಿಯೋ ಹರ್ಬರ್ಟ್

 1850-1916. ಬ್ರಿಟನಿನ ಫೀಲ್ಡ್-ಮಾರ್ಷ್‍ಲ್ ಮತ್ತು ರಾಜ್ಯನೀತಿ ನಿಪುಣ. ಐರ್ಲೆಂಡಿನಲ್ಲಿ ಹುಟ್ಟಿದ. ವುಲ್‍ವಿಚ್‍ನ ರಾಯಲ್ ಮಿಲಿಟರಿ ಅಕೆಡಮಿಯಲ್ಲಿ ಶಿಕ್ಷಣ ಪಡೆದು ರಾಯಲ್ ಎಂಜಿನಿಯರ್ ಶಾಖೆಯಲ್ಲಿ 1871ರಲ್ಲಿ ಕಮಿಷನ್ ಅಧಿಕಾರಿಯಾದ. ಫ್ರಾನ್ಸ್-ಪ್ರಷ್ಯಾ ಯುದ್ಧದಲ್ಲಿ ಫ್ರಾನ್ಸಿನ ಪಕ್ಷ ಕೆಲಸ ಮಾಡಿದ. 1874-82ರಲ್ಲಿ ಪ್ಯಾಲಸ್ಟೈನ್, ಅನನ್‍ಕೋಲಿಯ, ಸೈಪ್ರೆಸ್‍ಗಳಲ್ಲಿ ಸುದ್ದಿ ಇಲಾಖೆ ಮತ್ತು ಸರ್ವೆ ಕೆಲಸಗಳನ್ನು ಮಾಡಿದ. ಈಜಿಪ್ಟಿನ ಅಶ್ವದಳದ ಅಧಿಕಾರಿಯಾಗಿ ಸೂಡಾನ್ ಯುದ್ಧದಲ್ಲಿ ತೋರಿಸಿದ ಅಪೂರ್ವ ಧ್ಯೆರ್ಯ, ಸಹಿಷ್ಣುತೆಗಾಗಿ ವಿಖ್ಯಾತನಾದ. ಜಾಂಜಿಬಾರ್‍ನಲ್ಲಿ ಸ್ವಾಕಿನ್‍ನ ಗವರ್ನರ್ ಆಗಿಯೂ ಕೈರೋನಲ್ಲಿ ಅಡ್‍ಜುಟೆಂಟ್ ಜನರಲ್ ಆಗಿಯೂ ಕೆಲಸ ಮಾಡಿದ. ಈಜಿಪ್ಟಿನ ಪೋಲಿಸಿನಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ. ಈಜಿಪ್ಟಿನ ಸೇನೆಯಲ್ಲಿ ಸರದಾರನಾಗಿ ಡೋಂಗೋಲವನ್ನು ಹಿಡಿದಿದ್ದಕ್ಕಾಗಿ ಮೇಜರ್-ಜನರಲ್ ಆದ. ಅದ್ವಿತೀಯ ಕ್ರಿಯಾಶಕ್ತಿ, ಅರ್ಹತೆಗಾಗಿ ಈಜಿಪ್ಟಿನಲ್ಲಿ ಸರ್ವಸೈನ್ಯಾಧಿಪತಿಯಾದ. ಬಹು ಪ್ರಬಲರಾಗಿ ತೊಂದರೆ ಕೊಡುತ್ತಿದ್ದ ಮೇಹ್ದಿಗಳೆಂಬ ದರ್ವೇಶಿಗಳ ಸೇನೆಗಳನ್ನು ಅತ್‍ಬಾರಾ, ಓಂಡರ್‍ಮನ್ ಯುದ್ಧಗಳಲ್ಲಿ ಪರಾಕ್ರಮದಿಂದ ಸೋಲಿಸಿ ಸುಡಾನನ್ನು ಪುನಃ ಈಜಿಪ್ಟಿಗೆ ಸೇರಿಸಿದ. ಇದಕ್ಕಾಗಿ ನೈಲ್ ನದೀ ದಂಡಯಾತ್ರೆಯಲ್ಲಿ ನಾನಾ ಕಷ್ಟಗಳನ್ನು ಸಾಹಸದಿಂದ ಎದುರಿಸಿ ಅಸಂಖ್ಯಾತ ಅರಬರನ್ನು ಕ್ರೂರತನದಿಂದ ಕೊಂದ. ಅವನ ಗೆಲುವು ಲೋಕವನ್ನು ಬೆರಗು ಮಾಡಿತು. ಬ್ಯಾರನ್ ಬಿರುದನ್ನೂ ಜಿ.ಸಿ.ಬಿ. ಪ್ರಶಸ್ತಿಯನ್ನೂ ಪಡೆದ. ಪಾರ್ಲಿಮೆಂಟ್ ಅವನನ್ನು ಪ್ರಶಂಸಿಸಿ 30,000 ಪೌಂಡ್‍ಗಳನ್ನು ಬಹುಮಾನವಾಗಿ ನೀಡಿತು.

 ಫ್ರೆಂಚರ ಸೇನೆ ಸೂಡಾನಿನ ಕೆಲವು ಭಾಗಗಳನ್ನು ಆಕ್ರಮಿಸಲು ಕಿಚನರ್ ಅದನ್ನು ಚಾತುರ್ಯ, ದೃಢತೆಯಿಂದ ಹಿಂದಟ್ಟಿದ್ದು ಅವನ ಖ್ಯಾತಿಯನ್ನು ಏರಿಸಿತು. ಸುಡಾನಿನ ಗವರ್ನರ್ ಜನರಲ್ ಆದ. ನಾಶವಾಗಿದ್ದ ಖಾರ್ಟೂಮ್ ಪಟ್ಟಣವನ್ನು ಪುನರ್ನಿರ್ಮಿಸಿ ಸುಂದರ ಗೊಳಿಸಿದ. ರೈಲು ಮಾರ್ಗಗಳನ್ನು ಸ್ಥಾಪಿಸಿದ. ಲೆಫ್ಟೆನೆಂಟ್- ಜನರಲ್ ಆಗಿ ದಕ್ಷಿಣ ಆಫ್ರಿಕ ಯುದ್ಧದಲ್ಲಿ ಲಾರ್ಡ್ ರಾಬಟ್ರ್ಸ್‍ನ ಚೀಫ್-ಆಫ್-ಸ್ಟಾಫ್ ಆದ. 1900 ರಲ್ಲಿ ಪ್ರಧಾನ ದಂಡನಾಯಕನಾಗಿ ಸರ್ವಾಧಿಕಾರವನ್ನು ವಹಿಸಿಕೊಂಡ. ಬೋಅರ್‍ಗಳ ಗೆರಿಲ್ಲಾ ತಂತ್ರಗಳ ಹಾವಳಿಯನ್ನು ನಿಗ್ರಹಿಸಲು ಕಿಚನರನ ಗಣಿತಶಾಸ್ತ್ರ ಮನೋವೃತ್ತಿ ಚದುರಂಗದಾಟವನ್ನನುಸರಿಸಿ ಬ್ಲಾಕ್ ಹೌಸ್, ಸ್ಟಾಪ್, ಡ್ರೈವ್ ಎಂಬ ಪ್ರಬಲ ಸಂಚುಗಳನ್ನು ನಿಯೋಜಿಸಿತು. ಹೆಂಗಸರು, ಮಕ್ಕಳನ್ನು ರೋಗಗ್ರಸ್ತ ಠಾಣ್ಯಗಳಿಗೆ ಅಟ್ಟಿ, ಜಮೀನುಗಳನ್ನು ಸುಟ್ಟು ಬೋಅರ್‍ಗಳನ್ನು ಅಡಗಿಸಿದ. 

 ವೈಕೌಂಟ್ ಪದವಿಯನ್ನೂ ಆರ್ಡರ್-ಆಫ್-ಮೆರಿಟ್ ಪ್ರಶಸ್ತಿಯನ್ನೂ ಪಾರ್ಲಿಮೆಂಟಿನಿಂದ 50,000 ಪೌಂಡ್ ಪ್ರತಿಫಲವನ್ನೂ ಗಳಿಸಿದ. ಭಾರತದಲ್ಲಿ ಕಮಾಂಡರ್-ಇನ್-ಚೀಫ್ (1902-99) ಆಗಿ ಆಡಳಿತ ಕ್ರಮಗಳಲ್ಲೂ ಸೈನ್ಯಗಳಲ್ಲೂ ಅನೇಕ ಪರಿಷ್ಕರಣೆಗಳನ್ನು ನೆರವೇರಿಸಿದ. ಸೇನಾ ಇಲಾಖೆಯ ಸರ್ವಾಧಿಕಾರ ತನಗೆ ಸೇರಿದ್ದು, ವೈಸ್‍ರಾಯ್‍ಗಲ್ಲ ಎಂದು  ವೈಸ್‍ರಾಯ್ ಲಾರ್ಡ್ ಕರ್ಜನನೊಡನೆ ಜಗಳವಾಡಿದ. ಬ್ರಿಟಿಷ್ ಮಂತ್ರಿಮಂಡಲಿ ಬಹುಮಟ್ಟಿಗೆ ಕಿಚ್‍ನರನ್ನು ಅನುಮೋದಿಸಿದ್ದರಿಂದ ಕರ್ಜನ್ 1905ರಲ್ಲಿ ರಾಜೀನಾಮೆ ಕೊಟ್ಟ. ಭಾರತದ ವೈಸ್‍ರಾಯ್ ಆಗಬೇಕೆಂದು ಕಿಚ್‍ನರ್ ಮಾಡಿದ ಪ್ರಯತ್ನಗಳು ವಿಫಲವಾದವು. 1909 ರಲ್ಲಿ ಕಿಚ್‍ನರ್ ಫೀಲ್ಡ್-ಮಾರ್ಷಲ್ ಅಗಿ ಮೆಡಿಟರೇನಿಯನ್ ವಲಯದಲ್ಲಿ ಕಮಾಂಡರ್-ಇನ್-ಚೀಫ್ ಮತ್ತು ಹೈ ಕಮಿಷನರ್ ಆದ. ಆಸ್ಟೇಲಿಯ, ನ್ಯೂ ಜಿûೀಲೆಂಡ್‍ಗಳಲ್ಲಿ ಅಮೋಘ ಯೋಜನೆಗಳನ್ನು ನಿರ್ವಹಿಸಿದ. 1911ರಲ್ಲಿ ಈಜಿಪ್ಟ್‍ನಲ್ಲಿ ರೆಸಿಡೆಂಟ್ ಮತ್ತು ಕಾನ್‍ಸಲ್-ಜನರಲ್ ಆದ. ಟ್ರಿಪೋಲಿ ಮತ್ತು ಬಾಲ್ಕನ್ ಯುದ್ಧಗಳಲ್ಲಿ ಈಜಿಪ್ಟ್‍ಗೆ ಮಾರ್ಗದರ್ಶಕನಾಗಿದ್ದ. ಈತ ಅವಿವಾಹಿತ, ಗಮನವೆಲ್ಲ ತನ್ನ ಕರ್ತವ್ಯದ ಮೇಲೆಯೇ. ಉಳಿತಾಯದ ಬ್ಯಾಂಕುಗಳು, ಹತ್ತಿ ಮಾರ್ಕೆಟ್ಟುಗಳು, ಶಾಲೆಗಳು, ಆರೋಗ್ಯ ಯೋಜನೆಗಳು, ಆಸ್ವಾನ್ ಅಣೆಕಟ್ಟಿನ ಏರಿಕೆ. ರೈತಾಭಿವೃದ್ಧಿಗಳಿಗಾಗಿ ಪರಿಶ್ರಮಿಸಿದ. ಈ ಕೆಲಸಗಳ ಮೆಚ್ಚುಗೆಯಾಗಿ ಈತನಿಗೆ ಅರ್ಲ್ ಪದವಿ ಲಭಿಸಿತು. ಈಜಿಪ್ಟಿನ ಖೆಡೆವೆ ಅಬ್ಬಾಸ್ ಹಿಲ್ಮಿಯೊಡನೆ ಜಗಳವಾಡಿ ಅವನನ್ನು ಪದಚ್ಯುತಿ ಮಾಡುವುದರಲ್ಲಿದ್ದ.

 ಪ್ರಥಮ ಮಹಾಯುದ್ಧದ ಆರಂಭದಲ್ಲಿ ಕಿಚ್‍ನರ್ ಜನರ ಸರ್ವತೋಮುಖ ಮೆಚ್ಚುಗೆಯಿಂದ ಇಂಗ್ಲೆಂಡಿನ ಯುದ್ಧ ಕಚೇರಿಯಲ್ಲಿ ಕದನ ಮಂತ್ರಿಯಾದ. ಕ್ರಮವಾದ ಸೇನೆಯೊಂದೇ ಯುದ್ಧಕ್ಕೆ ಸಾಲದೆಂದೂ ಪ್ರಾದೇಶಿಕ ಸೈನ್ಯಗಳು ನಿರ್ಬಲವಾಗಿದ್ದವೆಂದೂ ವಾದಿಸುತ್ತ ಸ್ವಯಂಸೇವಕರ ಸೈನೈಗಳನ್ನು ನಿರ್ಮಿಸತೊಡಗಿದ. ಆ ಕಾಲದಲ್ಲಿ ಕಡ್ಡಾಯವಾಗಿ ಸೈನೈಕ್ಕೆ ಸೇರಿಸುವ ಕಾಯಿದೆ ಇನ್ನೂ ಬಂದಿರಲಿಲ್ಲ. ಅವನ ಹೆಸರಿನ ಇಂದ್ರಜಾಲ ಮಹಿಮೆಯಿಂದ ಒಂದು ವರ್ಷದೊಳಗೆ 17 ಲಕ್ಷ ಜನರು ಆತ್ಮಸಂತೋಷದಿಂದ ಕಿಚ್‍ನರ್ ಸೇನೆಗೆ ಸೇರಿದರು. ಸಂಖ್ಯೆ 30 ಲಕ್ಷಕ್ಕೇರಿತು. ಯುದ್ಧ ಸೆಕ್ರೆಟರಿ, ಚೀಫ್-ಆಫ್-ಸ್ಟಾಫ್, ಆಡಳಿತಗಾರ, ಸಮರ ತಂತ್ರಜ್ಞ, ಇಡೀ ದೇಶದ ಕೈಗಾರಿಕೆಗಳ ಮುಖಂಡ-ಈ ಅಧಿಕಾರಗಳನ್ನೆಲ್ಲ ತನ್ನೊಬ್ಬನ ಕೈಯಲ್ಲೇ ಇಟ್ಟುಕೊಳ್ಳಲಿಚ್ಛಿಸಿ ಕಿಚ್‍ನರ್ ಕೆಲವು ಕಾಲ ಸರ್ವಶಕ್ತನಾಗಿದ್ದ. ಇದು ಸರಿಯಲ್ಲ. ಅಷ್ಟು ಹೊಣೆಗಾರಿಕೆ ಎಂಥ ಶಕ್ತನಿಗೂ ಅಸಾಧ್ಯ, ಡಾರ್ಡೆನಲ್ಸ್‍ನ ಅನಾಹುತಕ್ಕೆ ಇದೇ ಕಾರಣ ಎಂದು ಇವನ ವಿರೋಧಿಗಳು ಬಗೆದರು. ಇದರ ಜೊತೆಗೆ ಅವನ ಅಹಂಕಾರ, ಸ್ವಪ್ರತಿಷ್ಠೆ. ಜವಾಬ್ದಾರಿಯನ್ನು ಇತರರಿಗೆ ವಹಿಸಲು ಅನಿಚ್ಛೆ. ಇತರರ ವಿವೇಚನೆಯ ನಿರಾಕರಣೆ-ಇವುಗಳಿಂದ ಅನೇಕರು ಅವನ ಶತ್ರುಗಳಾದರು. ಅಲ್ಲಿಂದ ವರ್ಗವಾಗಲು ಅವನು ಒಪ್ಪಲಿಲ್ಲ. ಕೆಲವು ಅಧಿಕಾರಗಳನ್ನು ಅವನಿಂದ ತೆಗೆಯಲಾಯಿತು. ಜನರಿಗೆ ಅವನು ಆರಾಧ್ಯದೇವತೆಯಂತಿದ್ದರೂ ಸಹೋದ್ಯೋಗಿಗಳ ತಿರಸ್ಕಾರದಿಂದ ಖಿನ್ನನಾದ.

ರಷ್ಯದಲ್ಲಿ ಸಾರನಿಗೂ ಸೇನಾ ಅಧಿಕಾರಿಗಳಿಗೂ ಸಲಹೆ ಕೊಡಲು ಕಿಚ್‍ನರ್ ಆಮಂತ್ರಿಸಲ್ಬಟ್ಟು ರಷ್ಯಕ್ಕೆ ಹೊರಟ. ದಾರಿಯಲ್ಲಿ ಅವನ ನಾವೆ ಹ್ಯಾಂಪ್‍ಷೈರ್ ಜೂನ್ 5, 1916ರಲ್ಲಿ ಬಿರುಗಾಳಿಗೆ ಸಿಕ್ಕಿಕೊಂಡು ಓರ್ಕನೀ ದ್ವೀಪಗಳಾಚೆ ಜರ್ಮನ್ ಮೈನ್‍ಗೆ ಬಡಿದು ನಾಶವಾಗಲು ಅವನು ಮುಳುಗಿಹೋದ. ಅವನ ಕೀರ್ತಿಯ ಮಹಿಮೆಗಾಗಿ ಸೇಂಟ್ ಪಾಲ್ಸ್ ಕೆಥೀಡ್ರಲ್‍ನಲ್ಲಿ ಏಳು ಲಕ್ಷ ಪೌಂಡ್ ಚಂದಾದಿಂದ ಅವನ ಸ್ಮಾರಕವನ್ನು ಸ್ಥಾಪಿಸಲಾಗಿದೆ.       

(ಎಂ.ಜಿ.ಕೆ.ಎಂ.; ಎಸ್.ಎಚ್.ಐ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ